ಯಾದಗಿರಿ: ನೋವೆಲ್ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರ ಗಂಟಲು ದ್ರವ ಮಾದರಿ ಸಂಗ್ರಹಿಸಿ ತ್ವರಿತಗತಿಯಲ್ಲಿ ವ್ಯಾಪಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಮುಂಬಯಿ, ಪುಣೆ, ಥಾಣೆಯಿಂದ ಜಿಲ್ಲೆಗೆ 15 ಸಾವಿರ ಜನ ವಲಸೆ ಕಾರ್ಮಿಕರು ವಾಪಸಾಗಿದ್ದಾರೆ. ಇವರಲ್ಲಿಯೇ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ತ್ವರಿತಗತಿಯಲ್ಲಿ ಕೋವಿಡ್ ಪಾಸಿಟಿವ್ ಪತ್ತೆಗೆ ನಿತ್ಯ ಸಾವಿರಕ್ಕಿಂತ ಹೆಚ್ಚು ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯ ಮಾದರಿಗಳ ಪರೀಕ್ಷೆಗಾಗಿ ಬೆಂಗಳೂರಿನ ವಿವಿಧ ಲ್ಯಾಬ್‌ಗಳಲ್ಲಿ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಜಿಲ್ಲೆಯ ಪಾಸಿಟಿವ್ ಪ್ರಕರಣಗಳಲ್ಲಿ ಜೂ.7ರಂದು 23 ಜನ ಗುಣಮುಖ ಹೊಂದಿದ್ದು, ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿರುವಂತೆ ತಿಳಿಸಲಾಗಿದೆ. ಜೂ. 8ರವರೆಗೆ ಒಟ್ಟು 93 ಜನ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.ವೈದ್ಯರು, ತಜ್ಞ ವೈದ್ಯರು, ಮೈಕ್ರೋ ಬಯಾಲಜಿಸ್ಟ್ ಇಚ್ಛಿತ ವೈದ್ಯರು ಸ್ವಇಚ್ಛೆಯಿಂದ ಸೇವೆ ಸಲ್ಲಿಸಲು ಮುಂದೆ ಬಂದಲ್ಲಿ ಮೊದಲು ತಮ್ಮನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳಲ್ಲಿ ಐಎಲ್‌ಐ/ ಸ್ಯಾರಿ ರೋಗ ಲಕ್ಷಣ ಕಂಡುಬಂದಲ್ಲಿ ಅಂಥವರ ದತ್ತಾಂಶವನ್ನು ಕಡ್ಡಾಯವಾಗಿ ಕೆಪಿಎಂಇ ವೆಬ್‌ಪೋರ್ಟಲ್‌ನಲ್ಲಿ ನಮೂದಿಸಬೇಕು. ಇಲ್ಲವಾದಲ್ಲಿ ಕೆಪಿಎಂಇ ಅಧಿನಿಯಮದಂತೆ ಕ್ರಮ ಜರುಗಿಸಲಾಗುವುದು. ಜಿಲ್ಲೆಯ ಎಲ್ಲ ಚಿಲ್ಲರೆ ಔಷಧ ವರ್ತಕರು ಜ್ವರ, ಕೆಮ್ಮು, ಅಲರ್ಜಿ, ಐಎಲ್‌ಐ/ ಸ್ಯಾರಿ ಪ್ರಕರಣಗಳಿಗೆ ಸಂಬಂಧಿಸಿದ ಔಷಧಗಳನ್ನು ಮಾರಾಟ ಮಾಡಿದ ವಿವರಗಳನ್ನು ಪ್ರತಿದಿನ ಎಂಟ್ರಿ ಮಾಡಲು ಸೂಚಿಸಲಾಗಿದೆ.
ಎಂಟ್ರಿ ಮಾಡದಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕೋವಿಡ್-19 ಹಾಗೂ ಡ್ರಗ್ಸ್ ಆಯಂಡ್ ಕಾಸ್ಮೆಟಿಕ್ಸ್ ಆಯಕ್ಟ್ ನಿಯಮಾವಳಿಗಳಂತೆ ಔಷಧ ಅಂಗಡಿಯ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೋವಿಡ್ ತಡೆಗಾಗಿ ಸರ್ಕಾರ ನಿರ್ದೇಶಿಸಿರುವ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ (ಎಸ್‌ಒಪಿ) ಅನುಸರಿಸಲಾಗುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಪ್ರತಿದಿನ ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಹೋಂ ಕ್ವಾರಂಟೈನ್‌ನಲ್ಲೇ ಇರುವಂತೆ ತಿಳಿಯಪಡಿಸಲಾಗುತ್ತಿದೆ. ಹೊರಗಡೆ ತಿರುಗಾಡಿದಲ್ಲಿ ಅಂಥವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ. ಅಜೀಮ್ ಪ್ರೇಮ್ ಜಿ ಫೌಂಡೆಷನ್ ವತಿಯಿಂದ ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಇದ್ದರು.