ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ಡಾ.ಸುಧಾಕರ


ಯಾದಗಿರಿ: ಕೊರೊನಾ ಹರಡುವಿಕೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ರಾಜ್ಯ ವೈಧ್ಯಕೀಯ ಸಚಿವ ಡಾ. ಸುಧಾಕರ ಸೂಚಿಸಿದರು.
ಅವರು ಜಿಪಂ ಸಭಶಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜ್ವರದ ಸೋಂಕು ಕಾಣಿಸಿಕೊಂಡ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರ ಪರೀಕ್ಷೆ ಮಾಡಬೇಕು ಮತ್ತು ಅವರ ಮೇಲೆ ನಿರಂತರ ನಿಗಾವಹಿಸಬೇಕು. ಹೆಚ್ಚಿನ ಜ್ವರ ತಪಾಸಣೆ ಕೇಂದ್ರಗಳನ್ನು ತೆರೆಯುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಸಭೆಯಲ್ಲಿ ಸೂಚನೆ ನೀಡಿದರು.

ಹೆಲ್ತ್ ವಾಚ್ ಆ್ಯಪ್ ಮೂಲಕ 2.57 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿರುವುದು ಮೆಚ್ಚುಗೆ ಸಂಗತಿ. ಟಾಸ್ಕ್ ಫೆÇೀರ್ಸ್ ಸಮಿತಿಗಳ ಮೂಲಕ ಹಿರಿಯ ನಾಗರಿಕರು ಮತ್ತು ಇತರ ರೋಗಿಗಳ ಮೇಲೆ ಸತತ ನಿಗಾವಹಿಸುವ ಮೂಲಕ ಜಿಲ್ಲಾಡಳಿತ ಆತಂಕವನ್ನು ನಿವಾರಿಸಿದೆ. ಗ್ರಾಮ ಮಟ್ಟದಲ್ಲಿ ಜನರ ಸಹಕಾರ ಉತ್ತಮವಾಗಿರುವುದು ಶ್ಲಾಘನೀಯ. ಹೊರಗಿನಿಂದ ಬಂದವರ ಮೇಲೆ ನಿಗಾ ವ್ಯವಸ್ಥೆ ಇದೇ ರೀತಿ ಮುಂದುವರಿದರೆ, ಕೊರೊನಾ ನಿಗ್ರಹ ಸಾಧ್ಯವಿದೆ ಎಂದು ಸಲಹೆ ನೀಡಿದರು.

ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಮತ್ತು ಶರಣಬಸಪ್ಪಗೌಡ ದರ್ಶನಾಪೂರ ಅವರು ಮಾತನಾಡಿ, ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾದ ವಲಸಿಗರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಬರುತ್ತಿರುವವರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಸಾರ್ವಜನಿಕರು ಕೂಡ ಕರೆ ಮಾಡಿ ವಲಸಿಗರ ಮಾಹಿತಿ ನೀಡುತ್ತಿದ್ದು, ಅಂತವರನ್ನು ಕ್ವಾರಂಟೈನ್‍ಗಳಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಐಎಲ್‍ಐ 1386 ಮತ್ತು 193 ಸ್ಯಾರಿ ಪ್ರಕರಣಗಳಿವೆ. ಇವುಗಳಲ್ಲಿ ಒಂದೂ ಪಾಸಿಟಿವ್ ಬಂದಿಲ್ಲ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗೃಹ ದಿಗ್ಬಂಧನದಲ್ಲಿರಿಸಲಾಗಿದ್ದು, ಇವರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಮತಗಟ್ಟೆ ಅಧಿಕಾರಿಗಳು, ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಂದ “ಹೆಲ್ತ್ ವಾಚ್ ಆ್ಯಪ್” ಮೂಲಕ ನಡೆಸುತ್ತಿರುವ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಕಾರ್ಯ ಶೇ.90.60ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.

ಕೋವಿಡ್-19 ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಭೆ ನಡೆಸಲಾಗಿದೆ. ಗೃಹ ದಿಗ್ಬಂಧನದಲ್ಲಿರುವವರ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮತ್ತು ಅವರ ಆರೋಗ್ಯ ಸ್ಥಿತಿ ವಿಚಾರಿಸಲು 15,264 ಜನರಿಗೆ ಕರೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುವಾಗ ಅವರಿಗೆ ಸ್ಟ್ಯಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅವರ ಮನೆಗೆ ಪೋಸ್ಟರ್ ಅಂಟಿಸುವ ಜೊತೆಗೆ ಗ್ರಾಮ ಮಟ್ಟದಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿಗಳಿಂದ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯ ನಂತರ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು, ಜಿಲ್ಲೆಯ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕಾಲೇಜಿನ ರೂಪುರೇಷಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಿ.ಜಾಧವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಡಾ.ಪಿ.ಜಿ. ಗಿರೀಶ್, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಶಂಕರಗೌಡ ಐರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್. ಪಾಟೀಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

English Kannada